Monday, April 2, 2012

ನನ್ನ ಅಚ್ಚುಮೆಚ್ಚಿನ ಭಾವಗೀತೆಗಳು

೧. ಎದೆ ತುಂಬಿ ಹಾಡಿದೆನು - ಜಿ.ಎಸ್.ಶಿವರುದ್ರಪ್ಪ

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು|೨|
ಎದೆ ತುಂಬಿ ಹಾಡಿದೆನು ಅಂದು ನಾನು
ಇಂದು ನಾ ಹಾಡಿದರೂ
ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ
ಅದುವೆ ಬಹುಮಾನ |೨|
ಹಾಡು ಹಕ್ಕಿಗೆ ಬೇಕೆ
ಹಾಡು ಹಕ್ಕಿಗೆ ಬೇಕೆ
ಬಿರುದು ಸನ್ಮಾನ?
ಎದೆ ತುಂಬಿ ಹಾಡಿದೆನು ಅಂದು ನಾನು
ಎಲ್ಲ ಕೇಳಲಿ ಎಂದು
ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ
ಕರ್ಮ ನನಗೆ |೨|
ಕೇಳುವವರಿಹರೆಂದು
ಕೇಳುವವರಿಹರೆಂದು
ನಾ ಬಲ್ಲೆ ಅದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರೂ
ಯಾರು ಕಿವಿ ಮುಚ್ಚಿದರೂ
ನನಗಿಲ್ಲ ಚಿಂತೆ
ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಏದು ತುಂಬಿ , ಮನ ತುಂಬಿ,
ತನು ತುಂಬಿ ಹಾಡಿದೆನು ಅಂದು ನಾನು...
ನಾನು....

೨. ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ - ಕೆ. ಎಸ್.ನಿಸಾರ್ ಅಹಮದ್

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೇ ಹಳೆಯ ನೆನಪೇ |
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆಯೇಕೆ ಮಧುರ ನೆನಪೇ || ಪ||
ಕಪ್ಪುಕಣ್ಣಿನ ದಿಟ್ಟ ನೋಟದಲೆ ತಡಮಾಡಿ
ತೊಟ್ಟಬಾಣದ ಹಾಗೆ ಬಾರದಿರು ನೆನಪೇ |
ಬಿರಿದ ತುಟಿಗಳ ತುಂಬು ನಗೆಯ ಕಾರಣವಲ್ಲಿ
ಹಿರಿದು ಕೊಲ್ಲಲು ಬಳಿಗೆ ಸಾರದಿರು ನೆನಪೇ ||೧||
ಸತ್ತ ಭೂತವನೆತ್ತಿ ಹಸಿರಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ |
ಭವ್ಯ ಭವಿತವ್ಯಕ್ಕೆ ಮೊಗ ಮಾಡಿ ನಿಂತಿರುವೆ
ಬೆಂದಲ್ಲಿ ಇಳಿಯದಿರು ಓ ಚೆನ್ನ ನೆನಪೇ ||೨||

 ೩. ಮುಚ್ಚು ಮರೆ ಇಲ್ಲದೆಯೇ-ಕುವೆಂಪು

ಮುಚ್ಚು ಮರೆ ಇಲ್ಲದೆಯೇ ನಿನ್ನಮುಂದೆಲ್ಲವನು ಬಿಚ್ಚಿಡುವೇ ಓ ಗುರುವೇ ಅಂತರಾತ್ಮ
ಪಾಪವಿದೆ ಪುಣ್ಯವಿದೆ , ನರಕವಿದೆ ನಾಕವಿದೆ, ಸ್ವೀಕರಿಸು ಓ ಗುರುವೇ ಅಂತರಾತ್ಮ
|| ಮುಚ್ಚು ಮರೆ ಇಲ್ಲದೆಯೇ ||
ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು, ಪಾಪ ತಾನುಳಿಯುವುದೇ ಪಾಪವಾಗಿ
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಂಗೇ, ನರಕ ತಾನುಳಿಯುವುದೇ ನರಕವಾಗಿ
|| ಮುಚ್ಚು ಮರೆ ಇಲ್ಲದೆಯೇ ||
ಸಾಂತ ರೀತಿಯನೆಮ್ಮೀ ಕದಡಿರುವುದೆನ್ನಾತ್ಮ, ನಾಂತರೀತಿಯು ಅದೆಂತೋ ಓ ಅನಂತ
ನನ್ನ ನೀತಿಯ ಕುರುಡಿನಿಂದೆನ್ನ ರಕ್ಶಿಸಯ್, ನಿನ್ನ ಪ್ರೀತಿಯ ಬೆಳಕಿನ ಆನಂದಕೆ
|| ಮುಚ್ಚು ಮರೆ ಇಲ್ಲದೆಯೇ ||


೪. ನೀನಿಲ್ಲದೇ ನನಗೇನಿದೆ -ಎಂ.ಎನ್ ವ್ಯಾಸ ರಾವ್

ನೀನಿಲ್ಲದೇ ನನಗೇನಿದೆ
ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ

ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು
ಕಹಿಯಾದ ವಿರಹದ ನೋವು ಹಗಲಿರುಳು ತಂದೇ ನೀನು
ಎದೆಯಾಸೆ ಎನೋ ಎಂದು ನೀ ಕಾಣದಾದೇ
ನಿಶೆಯೊಂದೇ ನನ್ನಲ್ಲಿ ನೀ ತುಂಬಿದೆ
ಬೆಳಕೊಂದೇ ನಿನ್ನಿಂದ ನಾ ಬಯಸಿದೆ
 

ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ
ಒಣಗಿರುವ ಎದೆನೆಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದ ನಾ ತಾಳುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೆ 


೫ . ಯಾವ ಮೋಹನ ಮುರಳಿ ಕರೆಯಿತು - ಗೋಪಾಲ ಕೃಷ್ಣ ಅಡಿಗ

ಯಾವ ಮೋಹನ ಮುರಳಿ ಕರೆಯಿತು

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತೋ
ನಿನ್ನ ಮಣ್ಣಿನ ಕಣ್ಣನು

ಹೂವು ಹಾಸಿಗೆ ಚಂದ್ರ ಚಂದನ
ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ
ಕರಣಗಳದೀ ರಿಂಗಣ

ಸಪ್ತ ಸಾಗರದಾಚೆ ಎಲ್ಲೋ
ಸುಪ್ತ ಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ
ಇಂದು ಇಲ್ಲಿಗು ಹಾಯಿತೇ

ವಿವಶವಾಯಿತು ಪ್ರಾಣ ಹಾ!
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೆ ಜೀವನ

ಯಾವ ಮೋಹನ ಮುರಳಿ ಕರೆಯಿತೋ
ಇದ್ದಕಿದ್ದಲೆ ನಿನ್ನನು
ಯಾವ ಬೃಂದಾವನವು ಚಾಚಿತೋ
ತನ್ನ ಮಿಂಚಿನ ಕೈಯನು

2 comments: